ಅಪರಾಧ ಮುಕ್ತ ಮೂಡುಬಿದಿರೆಯಾಗಲು ಸಿಸಿ ಕ್ಯಾಮರ ಕಣ್ಗಾವಲು 

ಯಶೋಧರ ವಿ.ಬಂಗೇರ

ಮೂಡುಬಿದಿರೆ: ಜಿಲ್ಲೆಯಲ್ಲೇ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆಯನ್ನು ಅಪರಾಧ ಮುಕ್ತ ನಗರವಾಗಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗುತ್ತಿದೆ. 

 

 

ಸಂಸ್ಥೆ-ಉದ್ಯಮಿಗಳ ಸಾಥ್:

ಅಪರಾಧಕೃತ್ಯಗಳ ನಡೆದಾಗ ತ್ವರಿತಗತಿಯಲ್ಲಿ ಸಹಕಾರಿಯಾಗುವ ಸಿ.ಸಿ ಕ್ಯಾಮರ ಅಳವಡಿಸುವ ಕುರಿತು ಪೊಲೀಸರು ಕಳೆದ ಒಂದು ವರ್ಷದಿಂದ ಜಾಗೃತಿ ಮೂಡಿಸುತ್ತಿದ್ದು, ಇದಕ್ಕೆ ಪೂರಕವಾಗಿ ಕೆಲವೊಂದು ಸಂಸ್ಥೆಗಳು ಉದ್ಯಮಿಗಳು ಹಾಗೂ ವ್ಯಾಪರಿಗಳು ಸ್ಪಂಧಿಸಿದ್ದಾರೆ. ತಮ್ಮ ಸಂಸ್ಥೆ ಅಳವಡಿಸುವ ಕ್ಯಾಮರಗಳನ್ನು ವಿಸ್ತರಿಸಿ  ಕಟ್ಟಡಗಳು ಮುಂಬಾಗಕ್ಕೂ, ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸುತ್ತಿದ್ದಾರೆ. ಅಂಗಡಿ ಕೋಣೆಯ ಒಳಗಡೆಗೆ ಸೀಮಿತವಾಗಿದ್ದ ಕ್ಯಾಮರಗಳು ತಮಗೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗುವ ರೀತಿಯಲ್ಲಿ ಅಳವಡಿಸುತ್ತಿರುವುದು ಮತ್ತೊಂದು ಸಕಾರತ್ಮಕ ನಡೆಯಾಗಿದೆ. 

 

 

40ಕ್ಕೂ ಅಧಿಕ ಕ್ಯಾಮರಗಳು:

ನಗರ ಪ್ರದೇಶದಲ್ಲಿ  ಪ್ರಮುಖ ಸಂಸ್ಥೆಗಳು ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಅಂಗಡಿಯವರೂ ಸಿ.ಸಿ ಕ್ಯಾಮರ ಅಳವಡಿಸಿದ್ದಾರೆ. ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ಬಸ್‍ನಿಲ್ದಾಣಕ್ಕೆ ಸುಮಾರು 80 ಸಾವಿರದ ಉತ್ತಮ ಗುಣಮಟ್ಟದ ಸಿ.ಸಿ ಕ್ಯಾಮರ ಅಳವಡಿಸಿದ್ದಾರೆ. ನಗರ ಪ್ರದೇಶದಲ್ಲಿ ಸಿ.ಸಿ ಕ್ಯಾಮರದ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದಲ್ಲೂ ಸಿ.ಸಿ ಕ್ಯಾಮರ ಜಾಗೃತಿ ಹೆಚ್ಚಾಗಿದೆ. ಪೊಲೀಸರ ಮನವಿಯ ನಂತರ 40ಕ್ಕೂ ಅಧಿಕ ಕಡೆಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ. ಬೆಳುವಾಯಿಯ ಕಾಂತಾವರ ಕ್ರಾಸ್ ಬಳಿ, ಬೆಳ್ಳೆಚ್ಚಾರು, ತೋಡಾರು ಮಸೀದಿ ಬಳಿ, ವಿದ್ಯಾಗಿರಿ, ಬೆಳುವಾಯಿ, ಶಿರ್ತಾಡಿ, ಮಾಸ್ತಿಕಟ್ಟೆ ರಸ್ತೆ ಬಳಿ ಸಹಿತ ಹಲವು ಕಡೆಗಳಲ್ಲಿ ಸಿ.ಸಿ ಕ್ಯಾಮರ ಈಗಾಗಲೇ ಕಾರ್ಯಾಚರಿಸುತ್ತಿದೆ. 

 

 

ಜಾಗೃತಿ ಹೀಗೆ:

ಮೂಡುಬಿದಿರೆಯನ್ನು ಅಪರಾಧ ಮುಕ್ತವಾಗಿಸುವ ನಿಟ್ಟಿನಲ್ಲಿ ಸಿ.ಸಿ ಕ್ಯಾಮರ ಕಣ್ಗಾವಲಿನ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಿರುವ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ವಿವಿಧ ಸಂಘಸಂಸ್ಥೆ, ಅಂಗಡಿ ಮಾಲೀಕರಲ್ಲಿ ಸಮಾಲೋಚನೆ ನಡೆಸಿದ್ದಾರೆ. ಉದ್ಯಮಿಗಳು, ಬಿಲ್ಡರ್‍ಗಳು, ಜ್ಯುವೆಲ್ಲರ್ಸ್ ಮಾಲಕರು ಮತ್ತು ವ್ಯಾಪಾರಸ್ಥರ ಸಭೆಯನ್ನು ಕರೆದು ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತಮ್ಮ ಪೂರ್ಣ ಸಹಕಾರದ ಅಗತ್ಯವಿದೆ ಮನವರಿಕೆ ಮಾಡಿದ್ದಾರೆ. ಹೊರಗಡೆಯ ರಸ್ತೆಗಳೂ ಕಾಣುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಉತ್ತಮ ಎಂಬ ಸಲಹೆಯನ್ನೂ ನೀಡಿದ್ದರು. ಸಾಮಾಜಿಕ ಕಳಕಳಿಯನ್ನು ಅರಿತ ಹೆಚ್ಚಿನವರು ಸಿ.ಸಿ ಕ್ಯಾಮರವನ್ನು ಹೆಚ್ಚಿಸಿದ್ದಾರೆ. ಇನ್ನೂ ಕೆಲವರು ಸಿ.ಸಿ ಕ್ಯಾಮರಗಳನ್ನು ಅಳವಡಿಸಲು ಉತ್ಸುಕರಾಗಿದ್ದಾರೆ. 

 

 

ಪುರಸಭೆಯಿಂದಲೂ ಸಿ.ಸಿ ಕ್ಯಾಮರ:

ಮೂಡುಬಿದಿರೆ ಪುರಸಭೆಯು ಮೂಡುಬಿದಿರೆ ನಗರವನ್ನು ಕಸಮುಕ್ತ ನಗರವನ್ನು ರೂಪಿಸುವ ನಿಟ್ಟಿನಲ್ಲಿ ಮತ್ತು ಸುರಕ್ಷತೆಯ ದೃಷ್ಠಿಯಿಂದ ಕೆಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಖಾಸಗಿ ಬಸ್ ನಿಲ್ದಾಣದಲ್ಲಿರುವ ಪುರಸಭೆಗೆ ಸೇರಿದ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ಎರಡು  ಸಿಸಿ ಕ್ಯಾಮರವನ್ನು  ಅಳವಡಿಸಿ ಸಾರ್ವಜನಿಕ ಸ್ಥಳದಲ್ಲಿ ಪುರಸಭೆಯವರು ಅಳವಡಿಸುತ್ತಿರುವ ಮೊದಲ ಸಿ.ಸಿ ಕ್ಯಾಮರವಾಗಿದೆ. ಜಿಲ್ಲಾ ಪೊಲೀಸ್ ಆಯುಕ್ತರು ಕಳೆದ ಕೆಲವು ಸಮಯಗಳ ಹಿಂದೆ ತಮ್ಮ ವ್ಯಾಪ್ತಿಗೆ ಬರುವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸುವಂತೆ ಸೂಚಿಸಿದ್ದು, ಮೂಡುಬಿದಿರೆಯಲ್ಲಿ ಇದು ಸಮಪರ್ಕವಾಗಿ ಜಾರಿಗೆ ಬರುತ್ತಿದೆ.

 

 

ಸಿ.ಸಿ ಕ್ಯಾಮರವನ್ನು ಅಳವಡಿಸಿದರೆ ಅಪರಾಧ ಕೃತ್ಯಗಳ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಬಹುದು. ಮುಖ್ಯವಾಗಿ ಜನರಲ್ಲೂ ಜಾಗೃತಿ ಮೂಡಿ ಗಲಾಟೆಯಂತಹ ಘಟನೆಗಳು ಕಡಿಮೆಯಾಗುತ್ತದೆ. ನಾವು ಮೂಡುಬಿದಿರೆ ನಾಗರಿಕರಲ್ಲಿ ಈ ಬಗ್ಗೆ ವಿನಂತಿ ಮಾಡಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 

-ಅನಂತ ಪದ್ಮನಾಭ

 ಪೊಲೀಸ್ ನಿರೀಕ್ಷಕ, ಮೂಡುಬಿದಿರೆ.

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album