ಮಕ್ಕಳಿಗೊಂದು ಮಾದರಿ ಶಿಬಿರ: ಸುಳ್ಯದ ಸ್ನೇಹ ಶಿಬಿರ 

ಸುಳ್ಯ: ಸುಗಬೇಸಿಗೆ ಶಿಬಿರಗಳೆಂದರೆ ಮಕ್ಕಳ ಮನಸ್ಸಿಗೂ ಶರೀರಕ್ಕೂ ರಿಲಾಕ್ಸ್ ನೀಡಿ ಶಕ್ತಿ-ಸ್ಪೂರ್ತಿ ತುಂಬುವ ಆಕರಗಳು. ಎಲ್ಲಾ ಮಕ್ಕಳಿಗೂ ಶಿಬಿರಗಳಲ್ಲಿ ಭಾಗವಹಿಸುವ ಆಸೆ. ಒಂದನೇ ತರಗತಿಯಿಂದಲೇ ಶಿಬಿರಗಳ ಮಜಾ ಬಯಸುವ ಮಕ್ಕಳೂ ಇದ್ದಾರೆ, ಕಳಿಸಿ ಕೊಡುವ ಹೆತ್ತವರೂ ಇದ್ದಾರೆ. ಹಾಗೆಯೇ ಎಂಟನೇ ತರಗತಿಯ ಮಕ್ಕಳೂ ಅಷ್ಟೇ ಆಸಕ್ತಿ ವಹಿಸಿ ಶಿಬಿರಗಳ ಹುಡುಕಾಟದಲ್ಲಿರುತ್ತಾರೆ. ಹೀಗಾಗಿ ಒಂದನೇಯಿಂದ ಎಂಟನೇ ತರಗತಿಯ ಮಕ್ಕಳ ಬೇಸಿಗೆ ಶಿಬಿರವೆಂದರೆ ಅದೊಂದು ವೈವಿಧ್ಯಮಯ ಆಸಕ್ತಿಗಳ ಮತ್ತು ಸಾಮರ್ಥ್ಯಗಳ ಸಂಗಮವಾಗಿರುತ್ತದೆ. ನಿಜಕ್ಕೂ ಮಕ್ಕಳೊಳಗಿನ ಅಪಾರ ಶಕ್ತಿಯು ಶಿಬಿರಗಳಲ್ಲಿ ಹೊರ ಚಿಮ್ಮುತ್ತದೆ.

 

 

ಶಿಬಿರಕ್ಕೆ ಸೇರ್ಪಡೆಗೊಂಡ ಎಲ್ಲಾ ಮಕ್ಕಳ ಆಸಕ್ತಿ, ಕುತೂಹಲ, ಕೌಶಲ್ಯ ಮತ್ತು ಸಾಮರ್ಥ್ಯಗಳ ಪ್ರಕಟಣೆಗೆ ಇಂಬು ಕೊಡುವಂತೆ ಚಟುವಟಿಕೆಗಳನ್ನು ಸಂಘಟಿಸುವುದು ಒಂದು ಸವಾಲೇ ಸರಿ. ಅಲ್ಲದೆ ಶಿಬಿರವು ಕೇವಲ ಮನರಂಜನೆಯಲ್ಲೇ ಸಮಯ ಮುಗಿಸುವಂತಾಗದೆ  ಬೌದ್ಧಿಕ ಸಾಮರ್ಥ್ಯಗಳನ್ನೂ ಬೆಳೆಸುವ ಆಯಾಮವನ್ನು ಹೊಂದಿದ್ದರೆ ಅದು ಲಾಭಕರ. ಅಂತಹ ಒಂದು ಶಿಬಿರವನ್ನು ಸುಳ್ಯದ ಸ್ನೇಹ ಶಾಲೆಯಲ್ಲಿ ಸಂಘmಸಲಾಯಿತು. ಇದರ ರೂವಾರಿಗಳೆಂದರೆ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಮತ್ತು ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು. ಇದರಲ್ಲಿ ಮನರಂಜನೆಯ ರೂಪದಲ್ಲೇ ಬೌದ್ಧಿಕ ವಿಕಾಸದ ಆಟಗಳು ಇದ್ದುವು.

 

 

ವಿವಿಧ ಶಾಲೆಗಳ ಮತ್ತು ಬೇರೆ ಬೇರೆ ಊರುಗಳ ನೂರಿಪ್ಪತ್ತೈದು ಮಕ್ಕಳು ಸ್ನೇಹ ಶಾಲೆಯಲ್ಲಿ ಸೇರಿದಾಗ ಅದೇ ಸ್ನೇಹ ಸಮ್ಮಿಲನವಾಯಿತು. ಸಾಮರ್ಥ್ಯಧಾರಿತ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಒಂದನೇಯಿಂದ ಮೂರನೇ ತರಗತಿಗಳ ಗುಂಪು, ನಾಲ್ಕು ಮತ್ತು ಐದನೇ ತರಗತಿಗಳ ಗುಂಪು ಮತ್ತು ಆರರಿಂದ ಎಂಟನೇ ತರಗತಿಗಳ ಗುಂಪು ಹೀಗೆ ಮೂರು ತಂಡಗಳನ್ನು ರೂಪಿಸಿದ್ದು ಅನುಕೂಲವಾಯಿತು. ಇದರಿಂದ ಪ್ರತಿ ಮಗುವಿಗೆ ಆಸಕ್ತಿದಾಯಕವಾಗಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಮಕ್ಕಳು ನಾಟಕ ಪ್ರದರ್ಶನ ಮುಗಿಸಿ ಶಿಬಿರದಿಂದ ಹಿಂದಿರುವಾಗ ವ್ಯಕ್ತ ಪಡಿಸಿದ ಸಂತೋಷ ಮತ್ತು ಕೃತಜ್ಞತೆಗಳೇ ಇದಕ್ಕೆ ಸಾಕ್ಷಿ. ಹೆತ್ತವರೂ ಮಕ್ಕಳ ಮಾತಿಗೆ ಮುದ್ರೆಯೊತ್ತಿದ್ದು ಶಿಬಿರದ ಯಶಸ್ಸನ್ನು ದಾಖಲಿಸಿದಂತಾಯಿತು.

 

ಪೇಪರ್ ಕ್ರಾಫ್ಟ್ ಮತ್ತು ಮುಖವಾಡ ತಯಾರಿ ಮುಂತಾದ ಖುಷಿ ಪಡುವ ಚಟುವಟಿಕೆಗಳನ್ನು ಶ್ರೀಹರಿ ಪೈಂದೋಡಿ, ಚಂದ್ರಾಡ್ಕರ್, ಗಣೇಶ ಒಡಿಯೂರು ನಡೆಸಿದರು. ಚಿತ್ತಾಕರ್ಷಕವಾದ  ಚಿತ್ರಕಲೆಯ ವೈವಿಧ್ಯಮಯ ಪ್ರಕಾರಗಳನ್ನು ಸತೀಶ್ ಪಂಜ ಮತ್ತು ಪ್ರಸನ್ನ ಐವರ್ನಾಡು ಇವರು ಪರಿಚಯಿಸಿದರು. ಪ್ರದರ್ಶನಾತ್ಮಕವಾದ ಹಾಡು, ನೃತ್ಯ, ನಾಟಕ ಮತ್ತು ಮೂಕಾಭಿನಯಗಳಲ್ಲಿ ತಮ್ಮ ಆಸಕ್ತಿಯಂತೆ ಮಕ್ಕಳು ಭಾಗವಹಿಸಿದರು. ಸಮಾರೋಪದ ದಿನ ರಂಗಕ್ಕೆ ಬಂದ ಈ ಚಟುವಟಿಕೆಗಳ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮೀನಾಕ್ಷಿ ,ಶ್ರೀಮತಿ ವಸಂತಿ ,ರಾಜ್‌ಮುಖೇಶ್, ಗಣೇಶ ಸುಳ್ಯ ಇದ್ದರು. ಕೇವಲ ಆರೇ ದಿನಗಳಲ್ಲಿ ತರಬೇತಿ ನೀಡಿ ಸುಮಾರು ನಲುವತ್ತೈದು ನಿಮಿಷಗಳ ’ಕುಣಿ ಕುಣಿ ನವಿಲೇ’ ಎಂಬ ನಾಟಕವನ್ನು ಪ್ರದರ್ಶನಕ್ಕೆ ಅಳವಡಿಸಿದವರು ನಿರ್ದೇಶಕ ಮೌನೇಶ್ ವಿಶ್ವಕರ್ಮ ಇವರು. ರಂಗವೇದಿಕೆ ನಿರ್ಮಾಣದಲ್ಲಿ ನಾರಾಯಣ ಶಿಬಾಜೆ ಮತ್ತು ನೆಪಥ್ಯ ನಿರ್ವಹಣೆಯಲ್ಲಿ ರಾಜ್ ಮುಖೇಶ್ ಸಹಕರಿಸಿದರು.

 

 

ಮಕ್ಕಳ ಸೃಜನಶೀಲ ಚಿಂತನೆಗೆ ಚಾಲನೆ ನೀಡುವ ಮೈಂಡ್ ಗೇಮ್ಸ್ ಮತ್ತು ಕಥೆ ಬರೆಯುವ ಕಲೆಯನ್ನು ಬೆಳೆಸುವ ಚಟುವಟಿಕೆಗಳನ್ನು ಡಾ. ಚಂದ್ರಶೇಖರ ದಾಮ್ಲೆಯವರು ನಡೆಸಿ ಕೊಟ್ಟದು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಸುಮಾರು 70 ಕತೆಗಳು ಈ ಶಿಬಿರದಲ್ಲಿ ಮಕ್ಕಳಿಂದಲೇ ಸಿದ್ಧಗೊಂಡು ಬೌದ್ಧಿಕ ಚಟುವಟಿಕೆಗಳ ಯಶಸ್ಸಿಗೆ ಸಾಕ್ಷಿಯಾಯಿತು. ಅಂತಯೇ ಸಿ.ಎಸ್ ಸುರೇಶ್ ಕೊಡಗು ಇವರು ನಡೆಸಿಕೊಟ್ಟ ಮೋಜಿನ ಗಣಿತ ಪಾಠವು ಮಕ್ಕಳ ಬಾಯಲ್ಲಿ ’ಸೂಪರ್’ ಏನ್ನಿಸಿತು.

 

 

ಶಿಬಿರದ ಒಂದು ವಿಶೇಷ ಚಟುವಟಿಕೆಯಾಗಿ ಅಜ್ಜ-ಪುಳ್ಳಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಮಂಗಳೂರು ಮತ್ತು ಸುಳ್ಯದ ಹಿರಿಯ ನಾಗರಿಕರು ಒಂದು ಸಣ್ಣ ಗುಂಪುಗಳಲ್ಲಿ ಕುಳಿತು ಮಕ್ಕಳಿಗೆ ತಮ್ಮ ಕಾಲದ ಬದುಕಿನ ಚಿತ್ರಣವನ್ನು ಅನುಭವದ ಕತೆಗಳ ಮೂಲಕ ಹೇಳಿ ತಲೆಮಾರುಗಳ ಕೊಂಡಿಗಳನ್ನು ಗಟ್ಟಿಗೊಳಿಸಿದರು.

 

 

ಈ ಶಿಬಿರದಲ್ಲಿ ಮ್ಯಾಜಿಕ್ ಮತ್ತು ವಿಜ್ಞಾನಗಳ ವ್ಯತ್ಯಾಸವನ್ನು ಪವಾಡ ಬಯಲು ಕಾರ್ಯಕ್ರಮದ ಮೂಲಕ ತಿಳಿಸಿದವರು ಶಿಕ್ಷಕ ನಿತ್ಯಾನಂದ  ಪುತ್ತೂರು ಇವರು.  ಇನ್ನು ಶರೀರ ಮತ್ತು ಮನಸ್ಸನ್ನು ಏಕತ್ರಗೊಳಿಸುವ ದೈಹಿಕ ಶಿಕ್ಷಣದ ಸ್ಟೆಪ್ ಡ್ಯಾನ್ಸ್ ನ್ನು ಕಲಿಸಿದ್ದು ಸ್ನೇಹ ಶಾಲಾ ದೈಹಿಕ ಶಿಕ್ಷಣ ನಿರ್ದೇಶಕರಾದ ಶೀನಪ್ಪ ಮಾಸ್ತರರು. ಇದಲ್ಲದೆ ದೃಶ್ಯ- ಶ್ರವಣ ಮಾಧ್ಯಮದ ಮೂಲಕ ಮಕ್ಕಳ ಆಸಕ್ತಿಗನುಗುಣವಾಗಿ ವೈವಿಧ್ಯಮಯ ಮಾಹಿತಿಗಳನ್ನು ನೀಡಲಾಯಿತು.

 

 ದೈಹಿಕ ಶುಚಿತ್ವದ ಬಗ್ಗೆ ಡಾ. ವಿದ್ಯಾಶಾಂಭವ ಪಾರೆ ಮತ್ತು ಹಲ್ಲುಗಳ ಶುಚಿತ್ವದ ಬಗ್ಗೆ ಡಾ. ವಿದ್ಯಾ ಶ್ರೀ ಕೃಷ್ಣ ಇವರು ಮಾಹಿತಿ ನೀಡಿದರು.  ಶಿಬಿರದ ಕೊನೆಯ ದಿನ ಸುಳ್ಯದ ಪಂಪ್ ಹೌಸ್ ಮತ್ತು ಪಯಸ್ವಿನಿ ನದಿಗೆ ನಡಿಗೆಯಲ್ಲಿ ಹೊರಸಂಚಾರ ಕಾರ್ಯಕ್ರಮವು ಮಕ್ಕಳ ಪಾಲಿಗೆ ಚೇತೋಹಾರಿಯಾಗಿತ್ತು. ಈ ಎಲ್ಲ ಚಟುವಟಿಕೆಗಳ ಸಮರ್ಪಕ ನಿರ್ವಹಣೆಗೆ ಸ್ನೇಹ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆಯವರ ನೇತೃತ್ವದಲ್ಲಿ ಶಿಕ್ಷಕಿಯರ ಬಳಗವು ಅಹರ್ನಿಶಿ ದುಡಿದದ್ದು ಸಾರ್ಥಕವೆನ್ನಿಸಿತು.

 

 

Comments on this Article
ismailshafi, hosangadi Fri, April-20-2012, 2:22
really good job
Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album