ಕೂಲಿ ಕಾರ್ಮಿಕ ಸಾವು ಪ್ರಕರಣ: ತನಿಖೆಗೆ ಮಾನವ ಹಕ್ಕು ಆಯೋಗದಿಂದ ಆದೇಶ



 

ಮೂಡುಬಿದಿರೆ: ಇಲ್ಲಿನ ಕೃಷ್ಣಕಟ್ಟೆಯ ಬಳಿ ಇರುವ ಅರಿಹಂತ ಕಟ್ಟಡದಿಂದ ಆಗಸ್ಟ್ 13ರಂದು ಕೂಲಿಕಾರ್ಮಿಕನೊಬ್ಬ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ಆರು ತಿಂಗಳೊಳಗೆ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕು ಆಯೋಗವು ಮಂಗಳೂರು ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದೆ.    

 

ಮೃತ ವ್ಯಕ್ತಿಯು ಮೂಲತ: ಪೊಳಲಿಯ ಕರಿಯಂಗಳ ನಿವಾಸಿ ಕಾಡ್ಯ ಅವರ ಮಗ ವಿಜಯ್(32ವ). ಈತ ಪ್ರಸ್ತುತ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿಯ ತನ್ನ ಸಹೋದರಿ ಮನೆಯಲ್ಲಿ ವಾಸವಾಗಿದ್ದನು. ಅರಿಹಂತ ಸಂಕೀರ್ಣದ ಬಾಡಿಗೆ ಕೋಣೆಯಲ್ಲಿ ವಾಸವಿರುವ ಕಾರ್ಮಿಕರಿಬ್ಬರು ಮಂಗಳವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಕಟ್ಟಡದ 3ನೇ ಮಹಡಿಯ ಶೌಚಾಲಯಕ್ಕೆ ಹೋದಾಗ ಅಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದರು.  ಕಳ್ಳ ಎಂದು ಬೊಬ್ಬೆ ಹೊಡೆದಾಗ ಆ ವ್ಯಕ್ತಿ ಕತ್ತಲೆಯಲ್ಲಿ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಕಟ್ಟಡಕ್ಕೆ ತಾಗಿಕೊಂಡಿದ್ದ ಮರವನ್ನು ಹಿಡಿದು ಇಳಿಯುವ ಅವಸರದಲ್ಲಿ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವ ಸಂಭವವಿದೆ.ಸ್ಥಳಿಯ ವ್ಯಕ್ತಿಯೊಬ್ಬರು ಈತ ಜೀವನ್ಮರಣ ಸ್ಥಿತಿಯಲ್ಲಿ ನರಳಾಡುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಆತನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಮೃತಪಟ್ಟಿದ್ದರು.

 

ಈ ಪ್ರಕರಣ ನಡೆದ ರಾತ್ರಿ ಅದೇ ಪ್ರದೇಶದಲ್ಲಿ ಅಂಗಡಿಗಳಲ್ಲಿ ಕಳ್ಳತನ ನಡೆದಿದ್ದರಿಂದ ಆತ ಕಳ್ಳತನ ನಡೆಸಲು ಹೋಗಿ ತಪ್ಪಿಸಿಕೊಳ್ಳಲು ಹೋದಾಗ ಬಿದ್ದು ಮೃತಪಟ್ಟಿರಬಹುದು ಎಂಬ ಸಂಶಯ ಒಂದು ಕಡೆಯಲ್ಲಿ ವ್ಯಕ್ತವಾಗಿದ್ದರೇ ಇನ್ನೊಂದು ಕಡೆಯಲ್ಲಿ ದಲಿತ ಸಂಘಟನೆಗಳು ಇದೊಂದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದರಿಂದ ಮೂಡುಬಿದರೆ ಪೊಲೀಸರು ಸಂಶಯಾಸ್ಪದ ಸಾವೆಂದು ಪ್ರಕರಣ ದಾಖಲಿಸಿದ್ದರು. ಆದರೆ ಮೃತ ವಿಜಯ್ನ ಅಳಿಯ ಗುಡ್ಡೆಯಂಗಡಿಯ ಯೋಗಿಶ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ `ಇದೊಂದು ಪೂರ್ವ ಯೋಜಿತ ಕೃತ್ಯ, ಸಾವಿನ ಬಗ್ಗೆ ಅನುಮಾನವಿರುವುದರಿಂದ ನಿಸ್ಪಕ್ಷಪಾತ ತನಿಖೆ ಆಗಬೇಕು’ ಎಂದು ಆಗ್ರಹಿಸಿ ಪೊಲೀಸರಿಗೆ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಈ ಹಿನ್ನಲೆಯಲ್ಲಿ ಮಾನವ ಹಕ್ಕು ಆಯೋಗವು ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album