ವಸಂತಿ ಕುಟುಂಬಕ್ಕೆ ಸಿಗದ ಪರಿಹಾರ: ನೆಲ್ಲಿಕಾರು ಗ್ರಾ.ಪಂ ಎದುರು ಸೆ.1ರಂದು ಪ್ರತಿಭಟನೆ



 

ಮೂಡುಬಿದಿರೆ : ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್ ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರದಾನ ಮಾಡುವ ವೇಳೆ ಆಕಸ್ಮಾತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು ಆ ಕುಟುಂಬಕ್ಕೆ ಇನ್ನೂ ಪರಿಹಾರ ಸಿಗದಿರುವುದರಿಂದ ಸೆ.1 ರಂದು ಬೆಳಿಗ್ಗೆ 10 ರಿಂದ 11ರವರೆಗೆ ನೆಲ್ಲಿಕಾರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಯ ಸ್ಥಾಪಕಾಧ್ಯಕ್ಷ ಸುದತ್ತ ಜೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.



ಸಂತ್ರಸ್ಥೆ ವಸಂತಿ ಪೂಜಾರ್ತಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ, ಪುತ್ತೂರು ತಹಸೀಲ್ದಾರ್, ಮೂಡುಬಿದರೆ ತಹಸೀಲ್ದಾರ್, ಸ್ಥಳೀಯ ಗ್ರಾಮ ಕರಣಿಕರಿಗೆ ಅರ್ಜಿ ಸಲ್ಲಿಸಿದ್ದರೂ ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮೃತ ಕುಟುಂಬ ಸಚಿವ ಅಭಯಚಂದ್ರ ಜೈನ್ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಸಚಿವರು ಮೃತ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ದುರ್ಘಟನೆಗಳು ನಡೆದರೂ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯವನ್ನು ಹೊಂದಿಲ್ಲ ಎಂದು ಅವರು ಆರೋಪಿಸಿದರು. ಗೃಹರಕ್ಷಕ ದಳದ ಜಾವೇದ್ ಮತ್ತವರ ತಂಡ ಹಾಗೂ ಅಗ್ನಿಶಾಮಕ ಸಿಬಂದಿಗಳು ನೀರಿನಲ್ಲಿ ಹುಡುಕಾಡಿ ಶವವನ್ನು ಮೇಲಕ್ಕೆತ್ತಿದ್ದಾರೆ. ಘಟನೆ ನಡೆದು ಎರಡು ತಿಂಗಳು ಕಳೆದರೂ ಮೃತ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಟ್ಟಿಲ್ಲ. ಪ್ರಶಾಂತನ ಶವಪತ್ತೆಗೆ ಅಹರ್ನಾಕಾಶಿ ಕೆಲಸ ಮಾಡಿದ ಗೃಹರಕ್ಷಕ ದಳದ ಸದಸ್ಯರಿಗೂ ನೆರವು ಸಿಕ್ಕಿಲ್ಲ. ಅಲ್ಲಿನ ಶಾಸಕಿ ಶಕುಂತಳಾ ಶೆಟ್ಟಿ ಗಮನಕ್ಕೂ  ತಂದರೂ ಪರಿಹಾರ ಒದಗಿಸಿಕೊಡುವಲ್ಲಿ ಸಕಾರಾತ್ಮಕ ಸ್ಪಂದನೆ ತೋರಿಲ್ಲ ಎಂದರು. 


ಇತ್ತೀಚೆಗೆ ಉಳ್ಳಾಲದಲ್ಲಿ ನೀರುಪಾಲಾದ ವ್ಯಕ್ತಿಗೆ, ತನಿಕೋಡು ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಕಬೀರ್ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸಿದ ಸರ್ಕಾರ ಪ್ರಶಾಂತನ ವಿಚಾರದಲ್ಲಿ ಮಾತ್ರ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಮೃತ ಯುವಕನ ತಾಯಿ ವಸಂತಿ ಪೂಜಾರ್ತಿ ಬಿಜೆಪಿ ಕಾರ್ಯಕರ್ತಿ ಎಂಬ ಕಾರಣಕ್ಕೆ ಸಚಿವ ಅಭಯಚಂದ್ರ ಘಟನೆ ಬಳಿಕ ಮೃತರ ಮನೆಗೆ ಹೋಗಿ ಸಾಂತ್ವನ ಕೂಡ ಹೇಳಿಲ್ಲ. ಪರಿಹಾರ ಮಂಜೂರಾತಿಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸದಿರುವುದರಿಂದ ಪ್ರಶಾಂತ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು. 


ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು ಬೇರೆ ಬೇರೆ ಮೂಲಗಳಿಂದ ಸರ್ಕಾರಕ್ಕೆ ಇಲ್ಲಿಂದ ಹಣ ಹೋಗುತ್ತದೆ. ಇಲ್ಲಿನ ನದಿಗೆ ಯಾವುದೇ ಭದ್ರತಾ ವ್ಯವಸ್ಥೆ ಕೂಡ ಇಲ್ಲ. ಪ್ರಶಾಂತನ ಘಟನೆಗೆ ಸರ್ಕಾರವೇ ಹೊಣೆಯಾಗಿದ್ದು ಕೂಡಲೇ ಆತನ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸರ್ಕಾರ  ಪರಿಹಾರ ಘೋಷಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥೆ ವಸಂತಿ ಪೂಜಾರ್ತಿ, ಸಂಘಟನ ಕಾರ್ಯದರ್ಶಿ ದಿನೇಶ್ ಜೆ.ಪಿ, ಮೂಡುಕೊಣಾಜೆ ವಲಯ ಅಧ್ಯಕ್ಷ ಮಹೇಂದ್ರ ಮಾಯಿಲೋಡಿ ಉಪಸ್ಥಿತರಿದ್ದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album