ವಿಹಿಂಪ ಸುವರ್ಣೋತ್ಸವ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ 

ಮೂಡುಬಿದಿರೆ: ನಮ್ಮ ಹಿಂದೂ ಸಮಾಜದಲ್ಲಿ ಧರ್ಮಾನುಷ್ಠಾನದ ಕೊರತೆಯೇ ಇಂದಿನ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಭಾರತದ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕತೆಯಿದ್ದರೆ ಮಾತ್ರ ಸಮರ್ಥ ಭಾರತದ ಬೆಳವಣಿಗೆಯಾಗುತ್ತದೆ. ಜನತೆ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳು ಧರ್ಮದ ಚೌಕಟ್ಟಿನೊಳಗಿದ್ದು ಜೀವನದಲ್ಲಿ ಲಕ್ಷ್ಮಣ ರೇಖೆ ದಾಟದಂತೆ ಎಚ್ಚರವಹಿಸಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತ್ಯಾನಂದ ನುಡಿದರು. 

 

 

ಅವರು ಶನಿವಾರ ರಾತ್ರಿ 

ಇಲ್ಲಿನ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ವಿಶ್ವ ಹಿಂದೂ ಪರಿಷತ್  ಬಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ ವಿಶ್ವ ಹಿಂದೂ ಪರಿಷತ್ ಇದರ ಸ್ವರ್ಣ ಮಹೋತ್ಸವ ಹಾಗೂ 12ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ನಡೆದ  ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಂಘಟನೆ ಮತ್ತು ಅನುಷ್ಠಾನದಿಂದ ಮಾತ್ರ ಹಿಂದೂ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು. ಪ್ರಧಾನ ಉಪನ್ಯಾಸ ನೀಡಿದ ಕಾರ್ಕಳದ ಯುವ ವಾಗ್ಮಿ ಶ್ರೀಕಾಂತ ಶೆಟ್ಟಿ ಸೀರಿಯಲ್ ಸಂಸ್ಕೃತಿಯ ಹಿಂದೆ ಬಿದ್ದ ನಾವು ಮಾತೃಭಾಷೆಯನ್ನು ಎಡಗಾಲಲ್ಲಿ ಒದ್ದು ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಕಳಿಸುತ್ತಿರುವ ದರಿದ್ರ ಸ್ಥಿತಿಯಲ್ಲಿದ್ದೇವೆ. ಧಾರಾವಾಹಿಗಳ ಪ್ರಭಾವದಿಂದಲೇ ಹಳಿತಪ್ಪಿರುವ ನಮ್ಮ ಸಾಮಾಜಿಕ ವ್ಯವಸ್ಥೆಯ ಪರಿಣಾಮವೆಂಬಂತೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ , ಹಿಂಸೆ , ಅಶಿಸ್ತಿನ ಪ್ರಕರಣಗಳು ಅತಿಯಾಗುತ್ತಿವೆ. ಪಕ್ಕದ ಕೇರಳದಲ್ಲೇ ಲವ್ ಜೆಹಾದ್‍ನಂತಹ ಚಟುವಟಿಕೆಗಳು ಮಿತಿಮೀರಿ ಕರಾವಳಿ ಕರ್ನಾಟಕ ಈಗ ಹಿಟ್ ಲಿಸ್ಟ್‍ನಲ್ಲಿದೆ. ಇಲ್ಲಿನ ಸಂಸ್ಕೃತಿ ಮೂಲೆಪಾಲಾಗಿ ಅಲ್ಲಿಯವರು ಭೂಮಿಯ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು. 

 

 

ಸಭಾಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆಯ ವಿದ್ಯುತ್ ಗುತ್ತಿಗೆದಾರ ಬೋಳ ವಿಶ್ವನಾಥ ಕಾಮತ್ ಮಾತನಾಡಿ ಸ್ವಶಿಸ್ತಿನ ಮೂಲಕ ಅಹಿತಕರ ಘಟನೆಗಳಿಗೆ ಆಸ್ಪದ ನೀಡದ ವಾತಾವರಣ ಸೃಷ್ಟಿಸಬೇಕು ಎಂದರು. ತಾಲೂಕು ಸಂಘ ಚಾಲಕ ಎಂ. ವಾಸುದೇವ ಭಟ್, ವಿಹಿಂಪ ಉಪಾಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಉಪಸ್ಥಿತರಿದ್ದರು. ವಿಹಿಂಪ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ ಸ್ವಾಗತಿಸಿದರು. ಬಜರಂಗದಳ ತಾಲೂಕು ಸಂಚಾಲಕ ಸೊಮನಾಥ ಕೋಟ್ಯಾನ್ ವಂದಿಸಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ಅಗಲಿದ ಕಾರ್ಯಕರ್ತ ಕೆ.ಮಧುಸೂಧನ ನಾಯಕ್ ಕುರಿತು. ವಿಹಿಂಪ ಕಾರ್ಯದರ್ಶಿ ಎಂ.ಶಾಂತಾರಾಮ ಕುಡ್ವ ಸಂಸ್ಮರಣೆ ನೆರವೇರಿಸಿದರು.  ಅರ್ಚಕ ಶಿವಾನಂದ ಶಾಂತಿ ನೇತೃತ್ವದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಹೊಸನಗರ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. 

 

ವಾಲ್ಮೀಕಿ ಕನಕರಿಗುಂಟು..ರಾಮ ಕೃಷ್ಣರಿಗಿಲ್ಲ..!

ನಮ್ಮಲ್ಲಿ ರಾಮನ ಜನ್ಮದಿನ ರಾಮನವಮಿಗೆ ರಜೆ ಇಲ್ಲ. ಆದರೆ ರಾಮಾಯಣ ಬರೆದ ವಾಲ್ಮೀಕಿ ಜಯಂತಿಗೆ ರಜೆ ಇದೆ. ಕೃಷ್ಣ ಹುಟ್ಟಿದ ಅಷ್ಟಮಿಗೆ ರಜೆ ಇಲ್ಲ. ಆದರೆ ಕೃಷ್ಣ ಭಕ್ತ ಕನಕದಾಸರ ಜಯಂತಿಗೆ ರಜೆ ಇದೆ. ನಮ್ಮ ಮಹಾನಾಯಕರಾದ ರಾಮಕೃಷ್ಣರ ಬಗ್ಗೆ ನಾವು ಗಂಭೀರ ಕಾಳಜಿ ಪ್ರಕಟಿಸಿಲ್ಲ. ಆದರೆ ವಾಲ್ಮೀಕಿ ಮತ್ತು ಕನಕದಾಸರ ಹಿಂದೆ ಅವರ ಸಮುದಾಯದ ಜನರಿದ್ದಾರೆ, ಅವರ ಓಟಿನ ಲೆಕ್ಕಾಚಾರ ಓಲೈಕೆಗಾಗಿ ಇದೆಲ್ಲ ನಡೆದಿದೆ.

-  ಶ್ರೀಕಾಂತ್ ಶೆಟ್ಟಿ 

 

ನಮ್ಮ ರಾಷ್ಟ್ರಕ್ಕೂ ಶನಿಭಾಧೆ ಇದೆ. ಆದರೆ ರಾಷ್ಟಾಭಿಮಾನದಿಂದ ಶ್ರೀಗಂಧದಂತೆ ತೇಯ್ದ ಸೇವೆ ವಿಶ್ವಹಿಂದೂ ಪರಿಷತ್ ಮತ್ತು ಅದಕ್ಕೆ ಪೂರಕವಾಗಿ ಬಜರಂಗದಳ ಕೆಲಸ ಮಾಡುತ್ತಿದೆ ಎಂದವರು ಅಭಿಮಾನದಿಂದ ಹೇಳಿದರು. 

- ಶ್ರೀಕಾಂತ್ ಶೆಟ್ಟಿ 


Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album